ರಾಜ್ಯಸಭೆ - 
ಭಾರತ ಗಣರಾಜ್ಯ ಸಂವಿಧಾನದ 79 ನೆಯ ವಿಧಿಯಂತೆ ರಾಜ್ಯಸಭೆ ಮತ್ತು ಲೋಕಸಭೆ ಎಂಬ ಎರಡು ಸದನಗಳನ್ನು ಸಂಸತ್ತು ಒಳಗೊಂಡಿದೆ. ಭಾರತದ ರಾಷ್ಟ್ರಪತಿ ಸಂಸತ್ತಿನ ಯಾವುದೇ ಸದಸ್ಯರಲ್ಲದಿದ್ದರೂ ಅವರನ್ನೂ ಸಂಸತ್ತು ಒಳಗೊಂಡಿದೆಯೆಂದು ಇದೇ ವಿಧಿ ತಿಳಿಸುತ್ತದೆ. ರಾಜ್ಯ ಸಭೆಯನ್ನು ಎರಡನೆಯ ಸದನ ಅಥವಾ ಸಂಸತ್ತಿನ ಮೇಲ್ಮನೆಯೆಂದೂ ಕರೆಯಲಾಗಿದೆ. 
  	ಸಂವಿಧಾನದ 80 ನೆಯ ವಿಧಿಯಂತೆ ರಾಜ್ಯಸಭೆಯ ಸದಸ್ಯರ ಸಂಖ್ಯೆ 250. ವಾಸ್ತವಾಗಿ 233 ಮಂದಿ ಇದ್ದಾರೆ. ಈ ಸದನದಲ್ಲಿ 7 ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡಿಲ್ಲ. ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಹಾಗೂ ಪುದುಚ್ಚೇರಿಗಳಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ (ಈಗ ದೆಹಲಿ ಪ್ರತ್ಯೇಕ ರಾಜ್ಯವಾಗಿದೆ). ಸಂವಿಧಾನದ ನಾಲ್ಕನೆಯ ಅನುಸೂಚಿಯಲ್ಲಿ ಭಾರತದ 25 ರಾಜ್ಯಗಳಿಗೆ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಕೆಳಕಂಡಂತೆ ರಾಜ್ಯಸಭೆಯ ಸ್ಥಾನಗಳನ್ನು ಹಂಚಲಾಗಿದೆ.

    	1 	ಆಂಧ್ರಪ್ರದೇಶ	18	15	ಉತ್ತರ ಪ್ರದೇಶ			 34
	 2	ಅಸ್ಸಾಮ್		 7	16	ಪಶ್ಚಿಮ ಬಂಗಾಳ			16
	 3	ಬಿಹಾರ		22	17	ಜಮ್ಮುಕಾಶ್ಮಿರ			 4
	 4	ಗೋವ	 	1	18	ನಾಗಾಲ್ಯಾಂಡ್			 1
	 5	ಗುಜರಾತ್	11	19	ಹಿಮಾಚಲ ಪ್ರದೇಶ  		 3
	 6	ಹರಿಯಾಣ 	5	20	ಮಣಿಪುರ			 1
	 7	ಕೇರಳ	 	9	21	ತ್ರಿಪುರ			 	 1	
	 8	ಮಧ್ಯಪ್ರದೇಶ 	16	22	ಮೇಘಾಲಯ			 1
	 9	ತಮಿಳುನಾಡು 	18	23	ಸಿಕ್ಕಿಮ್			 	 1
	10	ಮಹಾರಾಷ್ಟ್ರ 	19	24	ಮಿಜೋರಾಮ್			 1
	11	ಕರ್ನಾಟಕ 	12	25	ಅರುಣಾಚಲ ಪ್ರದೇಶ	 	 1
	12	ಒರಿಸ್ಸ 		10	26	ದೆಹಲಿ				 3
	13	ಪಂಜಾಬ್	 7	27	ಪುದುಚ್ಚೇರಿ			 1
	14	ರಾಜಸ್ತಾನ	10

  	ಸಂವಿಧಾನದ 80 ನೆಯ ವಿಧಿ ಅನ್ವಯ ರಾಜ್ಯಸಭಾ ಸದಸ್ಯರನ್ನು ರಾಜ್ಯವಿಧನ ಸಭೆಗಳ ಚುನಾಯಿತ ಸದಸ್ಯರು ಏಕಮತ ವರ್ಗಾವಣೆ ನಿಯಮಾನುಸಾರ ಆಯ್ಕೆ ಮಾಡುತ್ತಾರೆ. ಸಂಸತ್ತಿನ ಕಾನೂನಿನಂತೆ ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯಸಭೆಗೆ ಸದಸ್ಯರು ಪರೋಕ್ಷವಾಗಿ ಚುನಾಯಿತರ ಸಮೂಹದಿಂದ ಏಕಮತ ವರ್ಗಾವಣೆ ಪದ್ಧತಿ ಮೂಲಕ ಆಯ್ಕೆಯಾಗುತ್ತಾರೆ. ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಯಲ್ಲಿ ವಿಶೇಷ ಜ್ಞಾನ ಅಥವಾ ಅನುಭವ ಪಡೆದಿರುವ 12 ಮಂದಿ ಪರಿಣಿತರನ್ನು ರಾಜ್ಯಸಭೆಗೆ ರಾಷ್ಟ್ರಪತಿ ನಾಮಕರಣ ಮಾಡುತ್ತಾರೆ.

  	ಸಂವಿಧಾನದ 83 ನೆಯ ವಿಧಿ ಪ್ರಕಾರ ರಾಜ್ಯಸಭೆ ಖಾಯಂ ಸದಸ್ಯವಾಗಿರುವುದರಿಂದ ಇದನ್ನು ವಿಸರ್ಜಿಸುವಂತಿಲ್ಲ. ಇದರ ಸದಸ್ಯರು 6 ವರ್ಷದ ಅವಧಿಗೆ ಚುನಾಯಿತರಾಗುತ್ತಾರೆ. ಅವಧಿ ಮುಗಿದ ಮೂರನೆಯ ಒಂದರಷ್ಟು ಸದಸ್ಯರು ನಿವೃತ್ತಿಯಾದಾಗ ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಮೊದಲ ಬಾರಿಗೆ 1952 ರಲ್ಲಿ ಈ ಸದನ ರಚನೆಯಾದಾಗ ಒಟ್ಟು 216 ಸದಸ್ಯರಿದ್ದರು. ಅದೇ ವರ್ಷ ರಾಷ್ಟ್ರಪತಿಯವರು ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆಯನ್ನು ನಡೆಸಲು ಆಜ್ಞೆ ಹೊರಡಿಸಿದರು. ಇದರ ಪ್ರಕಾರ ಮೊದಲು ಚುನಾಯಿತರಾದ 216 ಸದಸ್ಯರನ್ನು ಲಾಟರಿ ಮೂಲಕ ಮೂರು ಗುಂಪುಗಳನ್ನಾಗಿ ಮಾಡಿ ಮೊದಲ ಗುಂಪಿನ ಮೂರನೆಯ ಒಂದರಷ್ಟು ಸದಸ್ಯರು 1954ರ ಏಪ್ರಿಲ್‍ನಲ್ಲಿ ನಿವೃತ್ತಿಯಾಗುವಂತೆ ಮಾಡಲಾಯಿತು. ಈ ಪ್ರಕಾರ ಭಾರತದ ಚುನಾವಣಾ ಆಯೋಗ 1954 ರಿಂದ ಮೂರನೆಯ ಒಂದರಷ್ಟು ಸ್ಥಾನಗಳಿಗೆ ಚುನಾವಣೆ ನಡೆಸುತ್ತಬರುತ್ತಿದೆ.

  	ಭಾರತ ಸಂವಿಧಾನದ 84 ನೆಯ ವಿಧಿಯಂತೆ ರಾಜ್ಯಸಭೆಯ ಸದಸ್ಯರಾಗಲು ಇರುವ ಅರ್ಹತೆಗಳೆಂದರೆ ಅಭ್ಯರ್ಥಿ ಭಾರತದ	 ಪ್ರಜೆಯಾಗಿರಬೇಕು ಹಾಗೂ ಮೂರನೆಯ ಅನುಸೂಚಿಯಲ್ಲಿ ತಿಳಿಸಿರುವಂತೆ ಪ್ರತಿಜ್ಞೆ ಮಾಡಬೇಕು. 30 ವರ್ಷಗಳು ತುಂಬಿರಬೇಕು ಮತ್ತು ಸಂಸತ್ತು ನಿಗದಿಪಡಿಸುವ ಇತರ ಅರ್ಹತೆಗಳನ್ನು ಹೊಂದಿರಬೇಕು. 1951ರ ಪ್ರಜಾಪ್ರತಿನಿಧಿ ಕಾಯ್ದೆಯ 3 ನೆಯ ವಿಭಾಗದಂತೆ ಸಂಬಂಧಪಟ್ಟ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರದ ಮತದಾರನಾಗಿರಬೇಕು. ಅದರೆ ತಮ್ಮದಲ್ಲದ ಲೋಕಸಭಾ ಕ್ಷೇತ್ರದಿಂದಲೂ ಅಭ್ಯರ್ಥಿಗಳು ಚುನಾಯಿತರಾಗಿರುವುದುಂಟು. ಸಂವಿಧಾನದ 102 ನೆಯ ವಿಧಿಯಂತೆ ಕೆಲವು ಅನರ್ಹತೆಗಳು ಅಭ್ಯರ್ಥಿಗೆ ಇದ್ದಲ್ಲಿ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ- ಕೇಂದ್ರ ಅಥವಾ ರಾಜ ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿದ್ದರೆ, ನ್ಯಾಯಲಯದಿಂದ ಮತಿಗೆಟ್ಟವನೆಂದು ತೀರ್ಮಾನಿಸಲ್ಪಟ್ಟಿದ್ದರೆ, ದಿವಾಳಿಯಾದರೆ ಮತ್ತು ಭಾರತದ ಪೌರನಾಗಿಲ್ಲದಿದ್ದರೆ ಅಥವಾ ವಿದೇಶಿ ಪೌರತ್ವಹೊಂದಿದ್ದು ವಿದೇಶಕ್ಕೆ ನಿಷ್ಠೆಯುಳ್ಳವನಾದರೆ, ಸಂಸತ್ತಿನ ಕಾನೂನಿನಂತೆ ಅನರ್ಹನಾದರೆ ಮತ್ತು ಸಂವಿಧಾನದ 10 ನೆಯ ಅನುಸೂಚಿಯಲ್ಲಿರುವ ಪಕ್ಷಾಂತರ ನಿಷೇಧ ಕಾನೂನು ಉಲ್ಲಂಘನೆಯಾದರೆ ಇತ್ಯಾದಿ.

   	ಸಂವಿಧಾನದ 99 ನೆಯ ವಿಧಿ ಅನ್ವಯ ಮೂರನೆಯ ಅನುಸೂಚಿಯಲ್ಲಿ ತಿಳಿಸಿರುವಂತೆ ರಾಜ್ಯಸಭೆಯ ಎಲ್ಲ ಸದಸ್ಯರು ಸಂವಿಧಾನವನ್ನು ಗೌರವಿಸಿ, ದೇಶದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ರಕ್ಷಿಸಿ ತನ್ನ ಕರ್ತವ್ಯಗಳನ್ನು ಪ್ರಮಾಣಿಕತೆಯಿಂದ ನಿರ್ವಹಿಸುತ್ತೇನೆಂದು ಸಭಾಧ್ಯಕ್ಷರ ಮುಂದೆ ಪ್ರತಿಜ್ಞೆ ಮಾಡಬೇಕು. ಪ್ರಮಾಣ ವಚನವನ್ನು ಸ್ವೀಕರಿಸದೆ ಸದನದ ಅಧಿವೇಶನದಲ್ಲಿ ಹಾಜರಾದರೆ ಅಥವಾ ಮತ ಚಲಾಯಿಸಿದರೆ 104 ನೆಯ ವಿಧಿಯಂತೆ ಪ್ರತಿದಿನ 500 ರೂಪಾಯಿ ದಂಡವನ್ನು ಕೊಡಬೇಕಾಗುತ್ತದೆ. ಅಲ್ಲದೆ 101 ನೆಯ ವಿಧಿ ಅನ್ವಯ ಸದನದ ಸದಸ್ಯರು ಅನುಮತಿಯಿಲ್ಲದೆ 60 ದಿನಗಳು ಎಲ್ಲ ಸಭೆಗಳಿಗೆ ಗೈರುಹಾಜರಾದರೆ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುವರು.

  	ಭಾರತದ ಸಂವಿಧಾನದ 105 ನೆಯ ವಿಧಿಯಲ್ಲಿ ರಾಜ್ಯಸಭಾಸದಸ್ಯರ ಹಕ್ಕು ಮತ್ತು ರಕ್ಷಣೆಗಳನ್ನು ವಿವರಿಸಲಾಗಿದೆ. ಅದರಂತೆ ಇವರಿಗೆ ಸಂವಿಧಾನ ಮತ್ತು ಸದನದ ಕಟ್ಟುಪಾಡುಗಳಿಗೆ ಒಳಪಟ್ಟಂತೆ ಸದನದಲ್ಲಿ ವಾಕ್‍ಸ್ವಾತಂತ್ರ್ಯವಿದೆ. ಸದನದಲ್ಲಿ ಅಥವಾ ಅವರ ಸಮಿತಿಗಳಲ್ಲಿ ಸದಸ್ಯರು ಮಾತನಾಡಿದ್ದಕ್ಕಾಗಲಿ ಅಥವಾ ಮತ ಚಲಾಯಿಸಿದ್ದಕ್ಕಾಗಲಿ ಯಾವುದೇ ನ್ಯಾಯಾಲಯದಲ್ಲಿ ಇವರನ್ನು ಪ್ರಶ್ನಿಸುವಂತಿಲ್ಲ ಮತ್ತು ಸದನದ ಯಾವುದೇ ವರದಿ ಅಥವಾ ಕಲಾಪಗಳ ಬಗ್ಗೆ ಪ್ರಕಟಣೆ ಹೊರಡಿಸಿದಾಗ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ. ಸಿವಿಲ್ ವಿವಾದಗಳಿಗೆ ಸಂಬಂಧಿಸಿದಂತೆ ಅಧಿವೇಶನದ ಸಮಯದಲ್ಲಿ ಅಥವಾ ಅದರ ಸಮಿತಿಗಳು ಸಭೆ ನಡೆಸುತ್ತಿರುವಾಗ ಸದಸ್ಯರನ್ನು ಬಂಧಿಸುವಂತಿಲ್ಲ. ಈ ರಕ್ಷಣೆ ಕ್ರಿಮಿನಲ್ ಅಪರಾಧಕ್ಕೆ ಅಥವಾ ಮುನ್ನೆಚ್ಚರಿಕೆ ಬಂಧನಕ್ಕೆ ಅನ್ವಯಿಸುವುದಿಲ್ಲ. ಈ ಕಾರಣಕ್ಕಾಗಿ ಬಂಧಿಸಿದಾಗ ಮತ್ತು ಬಿಡುಗಡೆಯಾದಾಗ ಸಭಾಧ್ಯಕ್ಷರಿಗೆ ತಕ್ಷಣ ಕಾರಣ ಸಮೇತ ತಿಳಿಸಬೇಕು. ಸಭಾಧ್ಯಕ್ಷರ ಅನುಮತಿಯಿಲ್ಲದೆ ಸಂಸತ್ತಿನ ಆವರಣದಲ್ಲಿ ಸದಸ್ಯರು ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷಿ ನುಡಿಯುವಂತೆ ಬಲವಂತ ಮಾಡುವಂತಿಲ್ಲ.

  	ರಾಜ್ಯಸಭೆಯ ಸದಸ್ಯರಿಗೆ 106 ನೆಯ ವಿಧಿ ಪ್ರಕಾರ ಸಂಸತ್ತು ಆಗಾಗ್ಗೆ ನಿಗದಿಪಡಿಸುವ ವೇತನ, ಭತ್ಯೆಗಳು ಮತ್ತು ಪಿಂಚಣಿಯನ್ನು ನೀಡಲಾಗುವುದು. ಜೊತೆಗೆ ನವದೆಹಲಿಯಲ್ಲಿ ವಸತಿ ಸೌಕರ್ಯ, ನಿಗದಿತ ಉಚಿತ ದೂರವಾಣಿ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುವುದು. 1998ರ ಆಗಷ್ಟ್ ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ವೇತನವನ್ನು ತಿಂಗಳಿಗೆ 1500 ರೂಪಾಯಿಗಳಿಂದ ಹೆಚ್ಚಿಸಲಾಯಿತು. ಅದಿವೇಶನದ ಸಮಯದಲ್ಲಿ ಮತ್ತು ಸದನ ಸಮಿತಿಗಳ ಸದಸ್ಯರಾಗಿದ್ದು ಅವುಗಳ ಸಭೆಗಳಲ್ಲಿ ಹಾಜರಾದಾಗ ದಿನ ಭತ್ಯೆ ಪಡೆಯುತ್ತಾರೆ. ಪಿಂಚಣಿ ಮೊತ್ತವನ್ನು ಕನಿಷ್ಠ 2500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

   	ರಾಜ್ಯಸಭೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ಕುರಿತಂತೆ ಹೇಳುವುದಾದರೆ ಸಂಸತ್ತಿನ ಎರಡು ಸದನಗಳು ಕಾನೂನು ರಚಿಸುವ ಪ್ರಮುಖ ಅಧಿಕಾರವನ್ನು ಹೊಂದಿವೆ. ಮಸೂದೆಯನ್ನು ಯಾವುದೇ ಸದನದಲ್ಲಿ ಮೊದಲು ಮಂಡಿಸಬಹುದು. ಮಸೂದೆ ಮುಖ್ಯವಾಗಿದ್ದರೆ ಅಥವಾ ವಿವಾದಾತ್ಮಕವಾಗಿದ್ದರೆ ಸದನದ ಸಮಿತಿಗೆ ಎರಡು ಸದನಗಳ ಜಂಟಿ ಸಮಿತಿಗೆ ಕೂಲಂಕುಷ ಪರಿಶೀಲನೆಗೆ ಒಪ್ಪಿಸಬಹುದು. ಜಂಟಿ ಸಮಿತಿಯಲ್ಲಿ ಲೋಕಸಭೆಗೆ ಹಾಗೂ ರಾಜ್ಯಸಭೆಗೆ 2:1 ರಷ್ಟು ಪ್ರಾತಿನಿಧ್ಯ ಇರುತ್ತದೆ. ಒಂದು ವೇಳೆ ಎರಡು ಸದನಗಳ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, 108 ನೆಯ ವಿಧಿ ಅನ್ವಯ ರಾಷ್ಟ್ರಪತಿ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಕರೆದು ಸಮಸ್ಯೆಯನ್ನು ಬಗೆಹರಿಸಬಹುದು. ಸಂವಿಧಾನದ ತಿದ್ದುಪಡಿಗೆ ಎರಡೂ ಸದನಗಳಿಗೆ ಸಮಾನ ಅಧಿಕಾರವಿದೆ. ತಿದ್ದುಪಡಿ ಮಸೂದೆಯನ್ನು ಯಾವುದೇ ಸದನದಲ್ಲಿ ಮೊದಲು ಮಂಡಿಸಬಹುದು. ಎರಡೂ ಸದನಗಳು ಸಂವಿಧಾನ ತಿದ್ದುಪಡಿಯನ್ನು ಒಪ್ಪದಿದ್ದರೆ ಜಂಟಿ ಅಧಿವೇಶನಕ್ಕೆ ಅವಕಾಶವಿಲ್ಲ ಮತ್ತು ತಿದ್ದುಪಡಿ ಮಸೂದೆ ಕಾಯ್ದೆಯಾಗುವುದಿಲ್ಲ.

  	ರಾಜ್ಯಸಭೆಗೆ ಮಂತ್ರಿಮಂಡಲ ಜವಾಬ್ದಾರಿಯಾಗಿಲ್ಲದಿದ್ದರೂ ರಾಜ್ಯಸಭೆ ವಿವಿಧ ತಂತ್ರಗಳ ಮೂಲಕ ಮಂತ್ರಿಮಂಡಲದ ಲೋಪದೋಷಗಳನ್ನು ಬಹಿರಂಗಪಡಿಸಿ ನಿಯಂತ್ರಿಸುತ್ತದೆ. ಅಧಿವೇಶನ ಸಮಯದಲ್ಲಿ ಪ್ರಶ್ನೆಗಳ ಮೂಲಕ ವಿವಿಧ ಖಾತೆಗಳ ನಿರ್ವಹಣೆ ಬಗ್ಗೆ ಸದಸ್ಯರು ಸರ್ಕಾರದ ಗಮನವನ್ನು ಸೆಳೆಯುತ್ತಾರೆ. ಅಲ್ಲದೆ `ಗಮನ ಸೆಳೆಯುವ ಸೂಚನೆ ಅರ್ಧಗಂಟೆ ಚರ್ಚೆ ಮತ್ತು ಆಯವ್ಯಯ ಪತ್ರದ ಮೇಲಿನ ಚರ್ಚೆ ಮುಂತಾದವುಗಳ ಮೂಲಕ ಸರ್ಕಾರವನ್ನು ಈ ಸದನ ನಿಯಂತ್ರಿಸಬಲ್ಲದು. ವಿವಿಧ ಅಧಿಕಾರಿಗಳು ಮತ್ತು ಆಯೋಗಗಳು ಒಪ್ಪಿಸಿದ ವರದಿಗಳನ್ನು ಚರ್ಚಿಸಿ ಅವುಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಲು ಅಧಿಕಾರವಿದೆ. ಚುನಾಯಿತ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರೆ ಸೇರಿ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ. ಅಲ್ಲದೆ, ಎರಡು ಸದನಗಳ ಸದಸ್ಯರು ಉಪರಾಷ್ಟ್ರಪತಿಯನ್ನು ಆಯ್ಕೆಮಾಡುತ್ತಾರೆ. ರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಅಧಿಕಾರ ಎರಡೂ ಸದನಗಳಿಗೆ ಇದೆ.

  	ಸಂವಿಧಾನದ 352 ನೆಯ ವಿಧಿ ಅನ್ವಯ ತುರ್ತುಪರಿಸ್ಥಿತಿಯನ್ನು ರಾಷ್ಟ್ರಪತಿ ಘೋಷಿಸಿದಾಗ ಒಂದು ತಿಂಗಳೊಳಗೆ ಎರಡೂ ಸದನಗಳಿಂದ ಅಂಗೀಕಾರ ಪಡೆಯಬೇಕು. ಇಲ್ಲದಿದ್ದರೆ ತುರ್ತುಪರಿಸ್ಥಿತಿ ರದ್ದಾಗುತ್ತದೆ. 356 ನೆಯ ವಿಧಿ ಪ್ರಕಾರ ಯಾವುದಾದರೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಾಗ ಎರಡು ತಿಂಗಳೊಳಗೆ ಎರಡೂ ಸದನಗಳ ಒಪ್ಪಿಗೆ ಪಡೆಯಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಎರಡು ಸದನಗಳು ತುರ್ತುಪರಿಸ್ಥಿತಿಯ ಮುಂದುವರಿಕೆಗೆ ಅನುಮತಿಕೊಡಬೇಕು. 360 ನೆಯ ವಿಧಿ ಅನ್ವಯ ಹಣಕಾಸು ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗಲೂ ಅದರ ಮುಂದುವರಿಕೆಗೂ ಎರಡು ತಿಂಗಳೊಳಗೆ ಎರಡೂ ಸದನಗಳ ಅಂಗೀಕಾರವನ್ನು ಪಡೆಯಬೇಕು. ಸಂವಿಧಾನದ 124 ನೆಯ ವಿಧಿ ಅನ್ವಯ ಉಚ್ಚನ್ಯಾಯಾಲಯದ ನ್ಯಾಯಾಧೀಶರನ್ನು ಮತ್ತು 217 ನೆಯ ವಿಧಿ ಅನ್ವಯ ರಾಜ್ಯಗಳ ಮುಖ್ಯ ನ್ಯಾಯಾಲಯಗಳ ನ್ಯಾಯಾಧೀಶರನ್ನು ಅಸಮರ್ಥತೆ ಅಥವಾ ರುಜುವಾತಾದ ದುರ್ನಡತೆ ಅವರನ್ನು ಪದಚ್ಯುತಿಗಿಳಿಸುವ ಅಧಿಕಾರ ಎರಡೂ ಸದನಗಳಿಗೆ ಇದೆ. ಎರಡೂ ಸದನಗಳು ಪ್ರತ್ಯೇಕವಾಗಿ ಒಟ್ಟು ಸದಸ್ಯರ ಬೆಂಬಲಪಡೆದು ಹಾಜರಿರುವ ಸದಸ್ಯರಲ್ಲಿ ಮೂರನೆಯ ಎರಡರಷ್ಟು ಸದಸ್ಯರು ನಿರ್ಣಯವನ್ನು ಅಂಗೀಕರಿಸಿದರೆ, ಆರೋಪಕ್ಕೊಳಗಾದ ನ್ಯಾಯಾಧೀಶರನ್ನು ರಾಷ್ಟ್ರಪತಿ ಪದಚ್ಯುತಿಗೊಳಿಸುತ್ತಾರೆ. ಇದೇ ರೀತಿಯಲ್ಲಿ ಭಾರತದ ಕಂಟ್ರೋಲರ್ ಆಡಿಟರ್ ಜನರಲ್ ಅವರನ್ನು ಎರಡೂ ಸದನಗಳು ಪದಚ್ಯುತಿಗೊಳಿಸಬಹುದು ಎಂದು 148ನೆಯ ವಿಧಿ ತಿಳಿಸುತ್ತದೆ. ಭಾರತದ ಮುಖ್ಯ ಚುನಾವಣಾಧಿಕಾರಿಯನ್ನು ಮೇಲಿನ ಕಾರಣಕ್ಕಾಗಿ ಇದೇ ವಿಧಾನದ ಮೂಲಕ ಎರಡೂ ಸದನಗಳು ಪದಚ್ಯುತಿಗೊಳಿಸಬಹುದೆಂದು 324 ನೆಯ ವಿಧಿ ತಿಳಿಸುತ್ತದೆ.

  	ರಾಜ್ಯಸಭೆಗೆ ಮೂರು ವಿಶೇಷ ಅಧಿಕಾರಗಳಿವೆ. ಅವೆಂದರೆ-ಸಂವಿಧಾನದ 249 ನೆಯ ವಿಧಿ ಅನ್ವಯ ಮೂರನೆಯ ಎರಡರಷ್ಟು ಬಹುಮತದಿಂದ ಒಂದು ನಿರ್ಣಯವನ್ನು ಅಂಗೀಕರಿಸಿ, ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯಪಟ್ಟಿಯಲ್ಲಿರುವ ಯಾವುದಾದರು ವಿಷಯದ ಮೇಲೆ ಕಾನೂನು ಮಾಡುವಂತೆ ಸಂಸತ್ತಿಗೆ ಶಿಫಾರಸ್ಸು ಮಾಡಬಹುದು. ಇಂತಹ ನಿರ್ಣಯವನ್ನು ಒಂದು ವರ್ಷದ ಅವಧಿಗೆ ಅಂಗೀಕರಿಸಿ, ಪ್ರತಿ ವರ್ಷವೂ ಅದನ್ನು ವಿಸ್ತರಿಸುವ ಅಧಿಕಾರ ಹೊಂದಿದೆ. ರಾಜ್ಯಸಭೆಯ ಅಸ್ತಿತ್ವಕ್ಕೆ ಮುನ್ನ ತಾತ್ಕಾಲಿಕ ಸಂಸತ್ತು ರಾಜ್ಯಸಭೆಯ ಅಧಿಕಾರವನ್ನು ಚಲಾಯಿಸಿ, ಕಾಳಸಂತೆಕೋರರವನ್ನು ನಿಯಂತ್ರಿಸಲು ಆಗಸ್ಟ್ 950 ರಂದು ಮತ್ತು ಕಳೆದುಹೋದ ಆಸ್ತಿಗೆ ಸಂಬಂಧಿಸಿದಂತೆ 1951 ರಲ್ಲಿ ಎರಡು ನಿರ್ಣಯಗಳನ್ನು 249 ನೆಯ ವಿಧಿ ಅನ್ವಯ ಅಂಗೀಕರಿಸಿತು. ಈ ನಿರ್ಣಯಗಳ ಹಿನ್ನಲೆಯಲ್ಲಿ ಸಂಸತ್ತು ಕಾನೂನನ್ನು ಜಾರಿಗೆ ತಂದಿತು. ಮೂರನೆಯ ಬಾರಿಗೆ 1986 ರಲ್ಲಿ ಇದೇ ವಿಧಿ ಅನ್ವಯ ನಿರ್ಣಯವನ್ನು ಅಂಗೀಕರಿಸಿ, ಪಂಜಾಬಿನ ಭಯೋತ್ಪಾದಕರನ್ನು ನಿಯಂತ್ರಿಸಲು ಸಂಸತ್ತಿಗೆ ಅಧಿಕಾರ ನೀಡಿತು. ಆದರೆ ಈ ನಿರ್ಣಯದ ಪ್ರಕಾರ ಸಂಸತ್ತು ಕಾನೂನನ್ನು ರಚಿಸಲಿಲ್ಲ.

  	ಸಂವಿಧಾನದ 312 ನೆಯ ವಿಧಿ ಪ್ರಕಾರ ರಾಜ್ಯಸಭೆ ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಹೊಸ ಅಖಿಲ ಭಾರತ ಸೇವಾ ಹುದ್ದೆಗಳನ್ನು ರಚಿಸುವಂತೆ ಸಂಸತ್ತಿಗೆ ಶಿಫಾರಸ್ಸು ಮಾಡಬಹುದು. ಅದರಂತೆ 1966 ರಲ್ಲಿ ಭಾರತ ಅರಣ್ಯ ಸೇವಾ ವಿಭಾಗವನ್ನು (ಐ.ಎಫ್.ಎಸ್.) ರಚಿಸಲಾಯಿತು. ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾದ ಉಪರಾಷ್ಟ್ರಪತಿಗಳನ್ನು ಅಧಿಕಾರದಿಂದ ತೆಗೆಯಲು ರಾಜ್ಯಸಭೆ ಮೊದಲು ಕ್ರಮ ಕೈಗೊಳ್ಳಲು ಅಧಿಕಾರ ಪಡೆದಿದೆ.

  	ಸಂವಿಧಾನ ರಚನಾಕಾರರ ದೃಷ್ಟಿಯಲ್ಲಿ ಈ ಸದನ ನಾಲ್ಕು ಮುಖ್ಯಧ್ಯೇಯಗಳನ್ನು ಹೊಂದಿದೆ. ಅವುಗಳೆಂದರೆ ಕಾನೂನು ರಚಿಸುವಾಗ ಈ ಸದನದ ನುರಿತ ಹಾಗೂ ಅನುಭವಿ ಸದಸ್ಯರು ತಮ್ಮ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು. ಲೋಕಸಭೆ ಅಧಿವೇಶನದಲ್ಲಿ ಇಲ್ಲದಿದ್ದಾಗ ಅಥವಾ ವಿಸರ್ಜನೆಯಾದಾಗ ಕೆಲವು ಕರ್ತವ್ಯಗಳನ್ನು ನಿರ್ವಹಿಸುವುದು ಮತ್ತು ಯಾವುದಾದರೂ ಶಾಸನದ ಬಗ್ಗೆ ಸದನಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಅದನ್ನು ಬಗೆಹರಿಸಲು ಲೋಕ ಸಭೆಯೊಡನೆ ಸಹಕರಿಸುವುದು.

  	ಭಾರತದ ರಾಜ್ಯಸಭೆ ತನ್ನ ಮೊದಲ ಅಧಿವೇಶನವನ್ನು 1952 ಮೇ 13 ರಂದು ಪ್ರಾರಂಭಿಸಿತು. ಈ ಸದನದಲ್ಲಿ ಅನುಭವಿಗಳು ಹಾಗೂ ಧೀಮಂತರು ಸೇವೆ ಸಲ್ಲಿಸಿ, ಇದರ ಉಪಯುಕ್ತತೆಯನ್ನು ಸಮರ್ಥಿಸಿದ್ದಾರೆ. ಪ್ರಸಿದ್ಧ ಲೇಖಕರಾಗಿದ್ದ ಮೈಥಿಲಿ ಶರಣಗುಪ್ತ, ತಾರಾಶಂಕರ್, ಉಮಾಶಂಕರ್ ಜೋಶಿ, ಆರ್,ಕೆ. ನಾರಾಯಣ, ವಿಜ್ಞಾನಿ ಸತ್ಯೇಂದ್ರನಾಥ ಬೋಸ್, ಸಮಾಜ ಸೇವಕ ಎನ್. ಆರ್. ಮಲ್ಕಾನಿ, ಕಾನೂನು ತಜ್ಞ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಶಿಕ್ಷಣತಜ್ಞ ಜಾಕೀರ್ ಹುಸೇನ್ ಇತಿಹಾಸಕಾರ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಕೆ. ಎಂ. ಪಣಿಕ್ಕರ್ ಮುಂತಾದವರು ರಾಜ್ಯಸಭೆಯ ಸದಸ್ಯರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಈ ಸದನದ ಕೆಲವು ಸದಸ್ಯರು ಕೇಂದ್ರ ಸರ್ಕಾರದ ಸಚಿವರಾಗಿಯೂ ತಮ್ಮ ದಕ್ಷತೆಯನ್ನು ಪ್ರದರ್ಶಿಸಿದ್ದಾರೆ.

  	ಈ ಸದನದಲ್ಲಿ ಅನೇಕ ಮಸೂದೆಗಳು ಚರ್ಚೆಗೊಳಪಟ್ಟ ಅನಂತರ ಅಂಗೀಕೃತವಾಗಿದೆ. 1962 ರಿಂದ 1971 ವರೆಗೆ 548 ಮಸೂದೆಗಳು ಅಂಗೀಕೃತವಾಗಿವೆ. ಅವುಗಳಲ್ಲಿ ಹಿಂದು ವಿವಾಹ ಕಾನೂನು (1955), ಹಿಂದು ಉತ್ತರಾಧಿಕಾರ ಕಾನೂನು (1956), ಹಿಂದು ದತ್ತು ಸ್ವೀಕಾರ ಮತ್ತು ಜೀವನಾಂಶ ಕಾನೂನು (1956) ಮತ್ತು ವಿವಾಹಿತ ಮಹಿಳೆಯ ಆಸ್ತಿ ಮಸೂದೆ (1959) ಹಾಗೂ (1961) ರ ಆದಾಯ ತೆರಿಗೆ ಮಸೂದೆ, ಮತ್ತು 1969 ರಲ್ಲಿ 14 ಬ್ಯಾಂಕುಗಳ ರಾಷ್ಟ್ರೀಕರಣ, 1971 ರ ರಾಷ್ಟ್ರಗೌರವ ಮಸೂದೆ ಇತ್ಯಾದಿ.

  	ರಾಜ್ಯಸಭೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯವಿಲ್ಲದ ಕಾರಣ ಕಡಿಮೆ ಸಂಖ್ಯೆಯ ಸದಸ್ಯರು ತಮ್ಮ ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ಶ್ರಮ ಪಡಬೇಕಾಗುತ್ತದೆ. ಪಕ್ಷಗಳ ಆಧಾರದ ಮೇಲೆ ಚುನಾಯಿತರಾದ ಸದಸ್ಯರು ತಮ್ಮ ಪಕ್ಷಕ್ಕೆ ಆದ್ಯತೆ ಕೊಟ್ಟು, ರಾಜ್ಯಗಳನ್ನು ನಿರ್ಲಕ್ಷಿಸುವ ಸಾಧ್ಯತೆಯೂ ಇದೆ. ಈ ಸದನದ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗುವುದರಿಂದ ಹಣಕಾಸಿನ ವಿಷಯದಲ್ಲಿ ಲೋಕಸಭೆ ಜೊತೆ ಸಮಾನ ಅಧಿಕಾರವನ್ನು ಹೊಂದಿಲ್ಲ. ಅಲ್ಲದೆ ಅವಿಶ್ವಾಸ ನಿರ್ಣಯದ ಮೂಲಕ ಮಂತ್ರಿಮಂಡಲವನ್ನು ಅಧಿಕಾರದಿಂದ ತೆಗೆಯಲು ಅಧಿಕಾರ ಇಲ್ಲ. ಅನೇಕ ಸಂದರ್ಭಗಳಲ್ಲಿ ಎರಡೂ ಸದನಗಳ ನಡುವೆ ಘರ್ಷಣೆ ಉಂಟಾಗಿದೆ. 1973 ರಲ್ಲಿ ಕೆಲವು ಸದಸ್ಯರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿ ರಾಜ್ಯ ಸಭೆಯನ್ನು ರದ್ದುಗೊಳಿಸುವಂತೆ ವಾದಿಸಿರುವುದೂ ಉಂಟು. ರಾಜ್ಯಸಭೆ ತೆರಿಗೆ ಕೊಡುವವರ ಮೇಲೆ ಭಾರವೆಂದೂ ಮತ್ತು ಲೋಕಸಭೆ ಅಂಗೀಕರಿಸಿದ ಮಸೂದೆಗಳ ಬಗ್ಗೆ ತಕರಾರುಗಳನ್ನು ಒಡ್ಡುವುದೆಂದೂ ವಾದಿಸಿದ್ದರು, ಆದರೆ ನಿರ್ಣಯವನ್ನು ಲೋಕಸಭೆ ತಿರಸ್ಕರಿಸಿತು. ಸಂಯುಕ್ತ ಪದ್ಧತಿ ಸರ್ಕಾರದಲ್ಲಿ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ರಕ್ಷಿಸಿ, ಅವುಗಳ ಸ್ವಾಯತ್ತತೆ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಮೇಲ್ಮನೆ ಇರುವುದು ಅಗತ್ಯವಾಗಿದೆ. ಅಮೆರಿಕದ ಸೆನೆಟ್ ನಂತೆ ಭಾರತದ ರಾಜ್ಯಸಭೆಯೂ ಎಲ್ಲ ರಾಜ್ಯಗಳಿಗೆ ಸಮಾನ ಪ್ರಾತಿನಿಧ್ಯ ನೀಡಿದರೆ ಇನ್ನೂ ಪರಿಣಾಮಕಾರಿಯಾಗಿ ಈ ಸದನ ಕೆಲಸ ಮಾಡಲು ಸಾಧ್ಯವಿದೆ ಎಂದು ಹೇಳುವರು. ಸಂವಿಧಾನದ 356 ನೆಯ ವಿಧಿ ಅನ್ವಯ ರಾಜ್ಯ ಸರ್ಕಾರಗಳನ್ನು ವಜಾಮಾಡುವ ಮೊದಲು ರಾಜ್ಯಸಭೆಯ ಒಪ್ಪಿಗೆ ಮತ್ತು ಅಭಿಪ್ರಾಯ ಪಡೆಯುವಂತೆ ಸೂಕ್ತ ತಿದ್ದುಪಡಿ ಮಾಡಬೇಕೆಂದು ನಾಮಕರಣ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ತಜ್ಞರ ಸಲಹೆ, ಸೂಚನೆಗಳನ್ನು ಪಡೆಯುವುದು ಉತ್ತಮ ಎಂದೂ ಇದರಿಂದ ರಾಜ್ಯಸಭೆಯ ಉಪಯುಕ್ತತೆ ಹೆಚ್ಚುವುದೆಂದೂ ತಜ್ಞರ ಅಭಿಪ್ರಾಯವಾಗಿದೆ.
  					        					  (ಎಚ್.ಎಂ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ